ಬರಾಅತ್ ಶ್ರೇಷ್ಠತೆಯಿಂದ ಕೂಡಿದ ರಾತ್ರಿ
ಪ್ರಾಚೀನ ಕಾಲದಿಂದಲೇ ಪಾವಿತ್ರ್ಯತೆಯನ್ನು ಕಲ್ಪಿಸಿದ ದಿನವಾಗಿದೆ 'ಶಅಬಾನ್ 15' ಅಥವಾ 'ಬರಾಅತ್ ದಿನ'. ರಜಬ್ ಅಲ್ಲಾಹನ ತಿಂಗಳು, ರಮಝಾನ್ ಸಮುದಾಯದ ತಿಂಗಳು, ಹಾಗೂ ಶಹಬಾನ್ ನನ್ನ ತಿಂಗಳು ಎಂದು ಪ್ರವಾದಿ (ಸ) ಹೇಳುತ್ತಿದ್ದರು.
ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರ ಸಮುದಾಯವು ಅಲ್ಲಾಹನು ಅತ್ಯಂತ ಕರುಣೆ ತೋರಿದ ಸಮುದಾಯವಾಗಿದೆ. ಕನಿಷ್ಠಾವಧಿಯಲ್ಲಿ ಗರಿಷ್ಟ ಸತ್ಕರ್ಮಗಳನ್ನು ಮಾಡಿದ ಪ್ರತಿಫಲವನ್ನುಅಲ್ಲಾಹನು ಈ ಸಮುದಾಯಕ್ಕೆ ನೀಡುತ್ತಾನೆ. ರಂಜಾನ್ ತಿಂಗಳಿನ ಒಂದು ರಾತ್ರಿಗೆ ಸಾವಿರ ತಿಂಗಳುಗಳಿಗಿಂತ ಹೆಚ್ಚಿನ ಪವಿತ್ರತೆಯನ್ನು ನೀಡಿದ ಲೈಲತುಲ್ ಖದ್ರ್ , ಶುಕ್ರವಾರ ರಾತ್ರಿ, ಈದ್ ರಾತ್ರಿಗಳು ಸೇರಿದಂತೆ ಹಲವಾರು ರಾತ್ರಿಗಳು ಇದಕ್ಕೆ ಉದಾಹರಣೆಯಾಗಿದೆ. ಬರಾಅತ್ ಎಂಬುದು ಇವುಗಳ ಪೈಕಿ ಪ್ರಮುಖವಾದದ್ದು. ಈ ರಾತ್ರಿಯಲ್ಲಿ ನಿವ೯ಹಿಸುವ ಸತ್ಕರ್ಮಗಳಿಗೆ ಹೆಚ್ಚಿನ ಪ್ರತಿಫಲವನ್ನು ನೀಡಿ ಅವನ ದಾಸರಾದ ನಾವು ಒಬ್ಬ ಉತ್ತಮ ದಾಸನಾಗಿ ಪರಿವರ್ತಿ ಹೊಂದಲು ಈ ರಾತ್ರಿಯನ್ನು ಅವನು ನಮಗೆ ದಯಪಾಲಿಸಿದ್ದಾನೆ.
ಎಲ್ಲಾ ತಿಂಗಳುಗಳು ಮತ್ತು ದಿನಗಳು ಹಾಗೂ ಸಮಯಗಳು ಒಂದೇ ರೀತಿಯಾಗಿರುವುದಿಲ್ಲ. ಕೆಲವೊಂದು ಇನ್ನು ಕೆಲವೊಂದಕ್ಕಿಂತ ಶ್ರೇಷ್ಠವಾಗಿರುತ್ತದೆ. ಅವುಗಳಲ್ಲಿ ಶಅಬಾನ್ 15ನೇ ರಾತ್ರಿಯೂ ಅತ್ಯಂತ ಶ್ರೇಷ್ಠತೆ ಪಡೆದ ರಾತ್ರಿಯಾಗಿದೆ.
ಬರಾಅತ್ ರಾತ್ರಿಯ ಪವಿತ್ರತೆಯನ್ನು ಒಪ್ಪಿಕೊಳ್ಳದ ನೂತನವಾದಿಗಳು ಅವರ ರೋಲ್ ಮೋಡೆಲ್ ಇಬ್ನು ತೈಮಿಯಾರ ಮಾತು ಈ ರೀತಿಯಾಗಿರುತ್ತದೆ:
ಶಅಬಾನ್ ತಿಂಗಳ ಪವಿತ್ರತೆಯನ್ನು ವಿವರಿಸುವ ಅನೇಕ ಹದೀಸುಗಳು ವರದಿಯಾಗಿದೆ, ಹಾಗೂ ಸಲಫ್ ಗಳ ಒಂದು ವಿಭಾಗ ಶಅಬಾನ್ 15 ರ ರಾತ್ರಿಯಲ್ಲಿ ನಮಾಝ್ ನಿರ್ವಹಿಸುತ್ತಿದ್ದರು.
ಈ ರಾತ್ರಿಯಲ್ಲಿ ಪ್ರತ್ಯೇಕ ನಮಾಜ್ ನಿರ್ವಹಿಸುವುದಾದರೆ ಅದಕ್ಕೆ ಸಲಫ್ ಗಳ ಒಂದು ಮಾದರಿ ಇದೆ.
ಹೀಗೆ ಸರ್ವರೂ ಅಂಗೀಕರಿಸುವ ಒಂದು ಪವಿತ್ರ ದಿನವಾಗಿದೆ ಬರಾಅತ್.
ಬರಾಅತ್ ಪದದ ಅರ್ಥ :
ಬರಾಅತ್ ಎಂಬ ಪದದ ಅರ್ಥ "ವಿಮೋಚನೆ" ಎಂದಾಗಿದೆ . ಸಹಸ್ರಾರು ನರಕ ನಿವಾಸಿಗಳನ್ನು ಶಿಕ್ಷೆಯಿಂದ ಮುಕ್ತಿಗೊಳಿಸುವ ಕಾರಣಕ್ಕಾಗಿ ಆ ರಾತ್ರಿಯನ್ನು ಬರಾಅತ್ ರಾತ್ರಿ ಅಥವಾ ವಿಮೋಚನೆಯ ರಾತ್ರಿ ಎಂದು ಕರೆಯಲಾಗುತ್ತದೆ.
إِنَّآ أَنزَلْنَٰهُ فِى لَيْلَةٍۢ مُّبَٰرَكَةٍ ۚ إِنَّا كُنَّا مُنذِرِينَ (الدّخان - 3)
ಅಲ್ಲಾಹನು ಹೇಳುತ್ತಾನೆ ಖಂಡಿತವಾಗಿಯೂ ನಾನು ಅದನ್ನು (ಕುರಾನ್) ಒಂದು ಅನುಗ್ರಹ ರಾತ್ರಿಯಲ್ಲಿ ಇಳಿಸಿದ್ದೇನೆ. ಪರಿಶುದ್ಧ ಸೂರತ್ ದುಖಾನ್‌ನಲ್ಲಿ ಹೇಳಲಾದ ವಚನಗಳನ್ನು ಕುರ್ ಆನ್ ವ್ಯಾಖ್ಯಾನಗಾರರಾಗಿರುವ ಇಮಾಂ ರಾಝಿ ಮತ್ತು ಇಕ್ರಿಮಾ (ರ) ಹಾಗೂ ಇನ್ನಿತರ ವಿದ್ವಾಂಸರು ಹೇಳುತ್ತಾರೆ.
ಈ ವಚನದಲ್ಲಿ ಉಲ್ಲೇಖಿಸಲಾದ ಅನುಗ್ರಹಿತ ರಾತ್ರಿ ಅದು ಶಅಬಾನ್ 15 ರ ರಾತ್ರಿಯಾಗಿದೆ.
ಬರಾಅತ್ ದಿನದ ಮಹತ್ವ:
1. ಪ್ರವಾದಿ (ಸ) ರವರು ಹೇಳಿದರು: ಶಅಬಾನ್ 15 ನೇ ದಿನ ಆಗಮನವಾದಾಗ ಆ ರಾತ್ರಿಯನ್ನು ನಮಾಝ್ ನಿರ್ವಹಿಸುವುದರಲ್ಲಿ ಸಮಯ ಕಳೆಯಿರಿ. ಹಾಗೂ ಅಂದಿನ ಹಗಲು ಉಪವಾಸ ಆಚರಿಸಿರಿ, ಪ್ರಾರ್ಥನೆ ಮಾಡಿರಿ. ಏಕೆಂದರೆ ಅಲ್ಲಾಹನು ಅಂದಿನ ಸೂರ್ಯಾಸ್ತಮಾನವಾದಾಗ ತನ್ನ ದಾಸನ ಪ್ರಾರ್ಥನೆಯನ್ನುಪ್ರತ್ಯೇಕವಾಗಿ ಕೇಳುತ್ತಾನೆ : ಪಾಪಮುಕ್ತಿ ನಡೆಸುವವರಿಲ್ಲವೇ..... ಅವರಿಗೆ ನಾನು ಕ್ಷಮಾಧಾನವನ್ನು ಮಾಡಿದ್ದೇನೆ. ಉದಾರತಿಯನ್ನು ಬಯಸುವವರಿಲ್ಲವೇ ...... ನಾನು ಅವರಿಗೆ ಉದಾರತಿಯನ್ನು ಸಮರ್ಪಿಸಿದ್ದೇನೆ . ಕಷ್ಟ ಕಾರ್ಪಣ್ಯಗಳಿಂದ ಪರೀಕ್ಷಿಸಲ್ಪಟ್ಟವರಿಲ್ಲವೇ..... ನಾನು ಅವರಿಗೆ ಸುಖ ಸೌಖ್ಯವನ್ನು ನೀಡಿದ್ದೇನೆ. ಹೀಗೆ ಮುಂಜಾನೆಯವರೆಗೆ ಅಲ್ಲಾಹನು ಪ್ರತಿಯೊಂದು ವಿಭಾಗಗಳನ್ನು ಕರೆದು ತನ್ನ ಆಶೀರ್ವಾದದ ಬಾಗಿಲುಗಳನ್ನು ತೆರೆಯುತ್ತಾನೆ .
2. ಪ್ರವಾದಿ (ಸ) ಹೇಳುತ್ತಾರೆ; ಶಅಬಾನ್ ತಿಂಗಳ ಮಧ್ಯ ರಾತ್ರಿಯಲ್ಲಿ ಒಂದು ವರ್ಷದ ಕಾರ್ಯ ವ್ಯವಹಾರಗಳು ಅಲ್ಲಾಹನು ನಿರ್ಧರಿಸುತ್ತಾನೆ. (ರೂಹುಲ್ ಮಆನಿ 25:113). ಈ ರಾತ್ರಿಯಲ್ಲಿ ಆ ವರ್ಷ ಮರಣ ಹೊಂದಲಿರುವ ಪ್ರತಿಯೊಬ್ಬರ ಮಾಹಿತಿಯನ್ನು ಅಲ್ಲಾಹನು ಮಲಕುಲ್ ಮೌತ್ ಅಝ್ರಾಈಲ್ (ಅ)ರಿಗೆ ತಿಳಿಸಿಕೊಡುತ್ತಾನೆ ಎಂದು ಪ್ರವಾದಿಯವರಿಂದ ವರದಿಯಾಗಿದೆ.
3. ಖಲ್ಬ್ ಗೋತ್ರದ ಕುರಿಗಳ ರೋಮಗಳ ಸಂಖ್ಯೆ ಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಅಲ್ಲಾಹನು ಆ ರಾತ್ರಿಯಲ್ಲಿ ತನ್ನ ಸಮುದಾಯದ ಮೇಲೆ ಕರುಣೆ ತೋರುವನು ಎಂದು ಪ್ರವಾದಿ (ಸ) ಅವರಿಂದ ವರದಿಯಾಗಿದೆ.
4. ಫಲಸ್ತೀನಿ ನ ಬೈತುಲ್ ಮುಖದ್ದಸಿಗೆ ಅಭಿಮುಖವಾಗಿ ನಮಾಝ್ ನಿರ್ವಹಿಸುವುದನ್ನು ಅಲ್ಲಾಹನ ತೀರ್ಮಾನದ ಪ್ರಕಾರ ಪುಣ್ಯ ಕಾಬಾಕ್ಕೆ ಮುಖ ಮಾಡಿ ನಮಾಜ್ ನಿರ್ವಹಿಸುವುದಕ್ಕೆ ಪ್ರವಾದಿ (ಸ) ರಿಗೆ ಅಧಿಸೂಚನೆ ಲಭಿಸಿದ್ದು ಈ ಮಹತ್ವವಾದ ದಿನದಲ್ಲಾಗಿತ್ತು .
ನಮಗೆಲ್ಲರಿಗೂ ಸುಪರಿಚಿತವಾದ ಒಂದು ಚರಿತ್ರೆಯಾಗಿದೆ ಇಸ್ಲಾಮಿನ ಐದನೇ ಖಲೀಫ ಎಂಬ ನಾಮದಿಂದ ವಿಖ್ಯಾತ ಪಡೆದ ಉಮರುಬ್ನು ಅಬ್ದುಲ್ ಅಝೀಝ್ .
ಬರಾಅತ್ ದಿನದಂದು ಅತಿಯಾಗಿ ನಮಾಜ್ ನಿರ್ವಹಿಸುತ್ತಿದ್ದರು ,ಹೀಗೆ ನಮಾಜ್ ಪೂರ್ಣಗೊಂಡಾಗ ಕೆಲವೊಂದು ವಿಷಯಗಳಿಂದ ಉಲ್ಲೇಖ ಗೊಂಡ ಒಂದು ಕಾಗದ ತನ್ನ ಕೈಗೆ ಬಂದು ಸೇರಿತು ಅದನ್ನು ತೆರೆದಾಗ ಆ ಲೇಖನದ ಪ್ರಕಾಶವು ಭೂಮಿಯಿಂದ ಬಾನಲೋಕಕ್ಕೆ ಚುಂಬಿಸುವಷ್ಟು ವಿದೂರಕ್ಕೆ ಹಾದು ಹೋಗುತ್ತಿತ್ತು ನಂತರ ಆ ಕಾಗದವನ್ನು ನೋಡಿದಾಗ ಅದರಲ್ಲೊಂದು ಉಲ್ಲೇಖವು ತನ್ನ ನಯನಗಳಿಗೆ ಸ್ಪರ್ಶಿಸಿತು ಏನಾಗಿತ್ತು ಆ ಕಾಗದದಲ್ಲಿ ?
ಮಲಿಕುಲ್ ಅಝೀಝಾದ ಅಲ್ಲಾಹನಿಂದ ತನ್ನ ಗುಲಾಮನಾದ ಉಮರುಬ್ನು ಅಬ್ದುಲ್ ಅಝೀಝ್ ಅವರಿಗೆ ನರಕವಿಮೋಚನೆಗೆ ಸಂಬಂಧಪಟ್ಟ ಒಂದು ಪತ್ರವಾಗಿತ್ತು. ಆ ರಾತ್ರಿಯ ಮಹತ್ವವನ್ನು ಎತ್ತಿ ಹಿಡಿದು ನಮಾಜ್ ನಿರ್ವಹಿಸಿದ ಕಾರಣಕ್ಕಾಗಿ ಅವರಿಗೆ ಅಲ್ಲಾಹನು ನೀಡಿದಂತಹ ಒಂದು ಕೊಡುಗೆಯಾಗಿದೆ. (ಈ ಸಂದೇಶವನ್ನು ರೂಹುಲ್ ಬಯಾನ್ ನಲ್ಲಿ ಬಹಳ ವಿಸ್ತಾರವಾಗಿ ವಿವರಿಸಲಾಗಿದೆ.)
5. ಪ್ರವಾದಿ (ಸ) ರವರ ಮೇಲೆ ಸ್ವಲಾತ್ ಹೇಳಲು ಅಲ್ಲಾಹನು ಸೂಚಿಸಿದ ದಿನವಾಗಿತ್ತು ಇದು .
6. ಮರಣ ಹೊಂದಿದವರಿಗೆ ಪ್ರಾರ್ಥನೆ ನಡೆಸಬೇಕಾದ ರಾತ್ರಿಯಾಗಿದೆ. ಪ್ರವಾದಿಯವರು ಆಯಿಶಾ ಬೀವಿಯವರ ನಿವಾಸದಲ್ಲಿ ಇರಬೇಕಾದ ರಾತ್ರಿ. ಅದೊಂದು ಬರಾಅತ್ ರಾತ್ರಿಯಾಗಿತ್ತು. ಆದರೆ ಆ ರಾತ್ರಿಯಲ್ಲಿ ಪ್ರವಾದಿಯವರನ್ನು ಕಾಣೆಯಾದಾಗ ಆಯಿಶಾ ಬೀವಿಯವರು ಅನ್ವೇಷಿಸಿದಾಗ ಪ್ರವಾದಿಯವರು ಜನ್ನತುಲ್ ಬಕೀಅ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದವರಿಗೆ ಪ್ರಾರ್ಥನೆ ನಡೆಸುತ್ತಿದ್ದರು.
7. ಶಅಬಾನ್ 15 ರಂದು ಸತ್ಯ ನಿಷೇಧಿ ಹಾಗೂ ಮನಸ್ಸಿನಲ್ಲಿ ದ್ವೇಷವನ್ನು ಹೊತ್ತು ನಡೆಯುವವನನ್ನು ಹೊರತುಪಡಿಸಿ ಇತರೆ ಎಲ್ಲಾ ಸತ್ಯ ವಿಶ್ವಾಸಿಗಳಿಗೆ ಅಲ್ಲಾಹನು ಕ್ಷಮಾಧಾನವನ್ನು ನೀಡಲಿದ್ದಾನೆ ಎಂದು ಅನೇಕ ಹದೀಸ್ ಗಳಲ್ಲಿ ಉಲ್ಲೇಖಿಸಲಾಗಿದೆ.
8. ಪ್ರಮುಖ ಕರ್ಮ ಶಾಸ್ತ್ರ ವಿದ್ವಾಂಸರಾದ ಇಬ್ನು ಹಜರ್ ಅಲ್ ಹೈತಮಿ (ರ) ತಮ್ಮ ಫತ್ವಾ ಅಲ್ ಕುಬ್ರಾದಲ್ಲಿ ಹೀಗೆ ಹೇಳುತ್ತಾರೆ: ಬರಾಅತ್ ರಾತ್ರಿ ಬಹಳ ಮಹತ್ವದ್ದಾಗಿದೆ ಎಂಬುದು ಖಚಿತ. ಆ ರಾತ್ರಿ ಪ್ರಾರ್ಥನೆಗೆ ಖಂಡಿತವಾಗಿಯೂ ಉತ್ತರಿಸಲಾಗುವುದು ಹಾಗೂ ಪಾಪಗಳನ್ನು ಕ್ಷಮಿಸಲ್ಪಡುವನು ಆದ್ದರಿಂದಲೇ ಬರಾಅತ್ ರಾತ್ರಿ ಪ್ರಾರ್ಥನೆಗಳಿಗೆ ಉತ್ತರ ಸಿಗುವ ರಾತ್ರಿ ಯಾಗಿದೆ ಎಂದು ಶಾಫಿಈ (ರ) ಸ್ಪಷ್ಟಪಡಿಸಿದ್ದಾರೆ.
ಪ್ರಾರ್ಥನೆಗೆ ಉತ್ತರ ಸಿಗುವ ಪ್ರಮುಖ ಐದು ರಾತ್ರಿಗಳು:
ಶಾಫಿಈ (ರ) ತಮ್ಮ ಕಿತಾಬುಲ್ ಉಮ್ಮ ಇದರಲ್ಲಿ ಹೀಗೆ ಹೇಳುತ್ತಾರೆ. ಐದು ರಾತ್ರಿಗಳಲ್ಲಿ ಪ್ರಾರ್ಥನೆಗೆ ಅಲ್ಲಾಹನು ಅತಿ ವೇಗವಾಗಿ ಉತ್ತರಿಸಲಾಗುವುದು.
1. ಶುಕ್ರವಾರ ರಾತ್ರಿ 2. ಈದುಲ್ ಫಿತ್ರ್ ರಾತ್ರಿ 3. ಈದುಲ್ ಅಝ್ಹಾ ರಾತ್ರಿ 4. ರಜಬಿನ ಮೊದಲ ರಾತ್ರಿ 5. ಶಅಬಾನ್ ತಿಂಗಳ 15 ನೇ ರಾತ್ರಿ.
ಮೂರು ಯಾಸೀನ್ ಹಾಗೂ ದುಆ:
ಪ್ರಾಚೀನ ಕಾಲದಿಂದಲೂ ಮುಸ್ಲಿಂ ಸಮುದಾಯವು ಆಚರಿಸಿಕೊಂಡು ಬರುತ್ತಿರುವಂತಹ ಒಂದು ವಾಡಿಕೆಯಾಗಿದೆ ಈ ದಿನದಂದು ಮೂರು ಯಾಸೀನ್ ಪಠಿಸಿ ದುವಾ ಮಾಡುವುದು.
1. ಆಯುಷ್ಯದಲ್ಲಿ ಬರಕತ್ ಲಭಿಸಲು (ದೀರ್ಘಾಯುಷ್ಯಕ್ಕಾಗಿ)
2. ರಿಝ್ಕಿನಲ್ಲಿ ವಿಶಾಲತೆಗಾಗಿ ( ಆಹಾರ ಪಾನೀಯ ಹಾಗೂ ಇನ್ನಿತರ ಸಂಪತತ್ತಿನಲ್ಲಿ ಬರಕತ್ ಲಭಿಸಲು)
3. ಈಮಾನಿನೊಂದಿಗೆ ಮರಣ ಹೊಂದಲು .
ರಮಝಾನ್ ತಿಂಗಳ ಆಗಮನದ ಭಾಗವಾಗಿ ರಜಬ್ ತಿಂಗಳ ಪ್ರಾರಂಭದಿಂದಲೇ ಪ್ರವಾದಿ (ಸ) ರವರು ಪ್ರತ್ಯೇಕ ಪ್ರಾರ್ಥನೆ ಯೊಂದಿಗೆ ಸಿದ್ದರಾಗುತ್ತಿದ್ದರು.
ಉಪವಾಸ:
ಶಅಬಾನಿನ ಹೆಚ್ಚಿನ ದಿನಗಳು ಪ್ರವಾದಿಯವರು ಉಪವಾಸವನ್ನು ಹಿಡಿಯುತ್ತಿದ್ದರು. ಇದನ್ನು ಸಂಬಂಧಿಸಿದ ಪ್ರವಾದಿಯವರಲ್ಲಿ ಕೇಳಿದಾಗ ತಮ್ಮ ಪ್ರತಿಕ್ರಿಯೆ ಇದಾಗಿತ್ತು. ಸರ್ವ ಸತ್ಕರ್ಮಗಳನ್ನು ಅಲ್ಲಾಹನು ತನ್ನತ್ತ ಆರೋಹಣವಾಗಿಸುವ ತಿಂಗಳಾಗಿದೆ ಶಅಬಾನ್, ಉಪವಾಸಿಗನಾಗಿ ನನ್ನ ಸತ್ಕರ್ಮಗಳನ್ನು ಅಲ್ಲಾಹನತ್ತ ಸೇರಲು ನಾನು ಇಷ್ಟಪಡುವೆ.
ಆಯಿಶಾ ಬೀವಿ (ರ) ರವರು ಹೇಳುತ್ತಾರೆ: ಪ್ರವಾದಿಯವರು ರಮಝಾನ್ ತಿಂಗಳನ್ನು ಹೊರತುಪಡಿಸಿ ಹೆಚ್ಚು ಉಪವಾಸ ಹಿಡಿಯುತ್ತಿದ್ದದ್ದು ಈ ಪರಿಶುದ್ಧ ಶಅಬಾನ್ ತಿಂಗಳಲ್ಲಾಗಿತ್ತು.
ಆದ್ದರಿಂದ ಆ ದಿನ ಉಪವಾಸ ಆಚರಿಸಿ, ರಾತ್ರಿಯಲ್ಲಿ ಸರ್ವ ಸತ್ಕರ್ಮಗಳಿಂದ ಹೃದಯವನ್ನು ಅಲಂಕರಿಸಿ , ಕ್ಷಮಾದಾನವನ್ನು ನೀಡುವವರಲ್ಲಿ ಒಳಗೊಂಡು, ಅಲ್ಲಾಹನ ಪ್ರೀತಿ ಪಾತ್ರರಾಗಲು ನಾವೆಲ್ಲರೂ ಮುಂದಾಗೋಣ. ಅಲ್ಲಾಹು ತೌಫೀಕ್ ನೀಡಿ ಅನುಗ್ರಹಿಸಲಿ ಆಮೀನ್.

No comments:
Post a Comment