*ಪ್ರವಾದಿ ಮುಹಮ್ಮದ್ ಮುಸ್ತಫﷺ*ಕಣ್ಣೀರಿಟ್ಟ ಕ್ಷಣಗಳು*
*ಉಟ್ಟ ವಸ್ತ್ರವೂ ಒದ್ದೆಯಾಯಿತು..!!*
ಮುಆದ್ ಬಿನ್ ಜಬಲ್ ರಳಿಯಲ್ಲಾಹು ಅನ್‌ಹುರವರು ಹೇಳುತ್ತಾರೆ; ನಾನು ಪ್ರವಾದಿﷺರವರೊಂದಿಗೆ
*یَوۡمَ یُنفَخُ فِی ٱلصُّورِ فَتَأۡتُونَ أَفۡوَاجࣰا*
*ಈ ಸೂಕ್ತದ ಅರ್ಥವೇನು.?* ಎಂದು ಕೇಳಿದೆ.
ನನ್ನ ಪ್ರಶ್ನೆ ಕೇಳಿ ಪ್ರವಾದಿﷺರವರು ಅತ್ತು ಬಿಟ್ಟರು. ಎಷ್ಟು ಅತ್ತು ಬಿಟ್ಟರೆಂದರೆ ಅವರ ಉಟ್ಟ ವಸ್ತ್ರವು ಒದ್ದೆಯಾಗಿ ಬಿಟ್ಟಿತು! ನಂತರ ಹೇಳಿದರು; *ಓ ಮುಆದ್! ತಾವು ಬಹು ದೊಡ್ಡ ವಿಚಾರದ ಕುರಿತು ಪ್ರಶ್ನೆ ಕೇಳಿದಿರಿ. ಮಹ್‌ಶರಾದಲ್ಲಿ ನನ್ನ ಸಮುದಾಯವು ಹನ್ನೆರಡು ವಿಭಾಗಗಳಾಗಿ ಬೇರ್ಪಡಲಿವೆ.*
"ಒಂದನೇ ವಿಭಾಗದವರು ಕೈ ಕಾಲುಗಳಿಲ್ಲದಂತಹ ಸ್ಥಿತಿಯಲ್ಲಿ ಖಬರ್‌ನಿಂದ ಎದ್ದೇಳುವರು. ಅವರು ನೆರೆಹೊರೆಯವರಿಗೆ ತೊಂದರೆಯನ್ನು ನೀಡಿದವರಾಗಿರುವರು."
*ಎರಡನೆ ವಿಭಾಗದವರು:* ಹಂದಿಯ ರೂಪದೊಂದಿಗೆ ಖಬ್‌ರ್‌ನಿಂದ ಎದ್ದೇಳುವರು. ಅವರು ನಮಾಝ್‌ನಲ್ಲಿ ಆಲಸ್ಯತನ ತೋರಿಸುವ ಮತ್ತು ಅಸಡ್ಡೆ ಮನೋಭಾವವನ್ನು ತೋರುವವರಾಗಿರುವರು.
*ಮೂರನೆಯ ವಿಭಾಗದವರು;* ಹೊಟ್ಟೆ, ಪರ್ವತದಂತೆ ಉಬ್ಬಿಸಿಕೊಂಡ ಸ್ಥಿತಿಯಲ್ಲಿ ತಮ್ಮ ಖಬ್‌ರ್‌ನಿಂದ ಎದ್ದೇಳುವರು. ಅದರಲ್ಲಿ ಹಾವು ಮತ್ತು ಚೇಳುಗಳು ತುಂಬಿರುವುದು. ಅವರು ಝಕಾತ್‌ನ ಸಂಪತ್ತನ್ನು ಸಂದಾಯ ಮಾಡದವರಾಗಿರುವರು.
*ನಾಲ್ಕನೆಯ ವಿಭಾಗದವರು;* ಬಾಯಿಯಲ್ಲಿ ರಕ್ತ ಒಸರುತ್ತಿರುವಂತಹ ಸ್ಥಿತಿಯಲ್ಲಿ ಖಬರ್‌ನಿಂದ ಎದ್ದೇಳುವರು. ವಸ್ತುಗಳನ್ನು ಮಾರುವಾಗ ಮತ್ತು ಖರೀದಿಸುವಾಗ ಸುಳ್ಳು ಹೇಳುವವರಾಗಿರುವರು.
*ಐದನೆಯ ವಿಭಾಗದವರು;* ಶರೀರವು ಊದಿಕೊಂಡಿದ್ದು, ಶವ ನಾರುವುದಕ್ಕಿಂತಲೂ ತೀವ್ರವಾದ ದುರ್ಗಂಧವನ್ನು ಹೊಂದಿರುವ ಸ್ಥಿತಿಯಲ್ಲಿ ಖಬ್‌ರ್‌ನಿಂದ ಎದ್ದೇಳುವರು. ಇವರು ಜನರಿಗೆ ಹೆದರಿ ಪಾಪಗಳನ್ನು ಗುಪ್ತವಾಗಿ ಮಾಡುವವರಾಗಿದ್ದರು. ಅಲ್ಲಾಹನನ್ನು ಭಯಪಡುತ್ತಿರಲಿಲ್ಲ.
*ಆರನೆಯ ವಿಭಾಗದವರು:*
ಕತ್ತು ಕತ್ತರಿಸಲ್ಪಟ್ಟಂತೆ ಖಬರ್‌ನಿಂದ ಎದ್ದೇಳುವರು. ಇವರು ಸುಳ್ಳು ಸಾಕ್ಷ್ಯಗಳನ್ನು ಹೇಳುವವರಾಗಿದ್ದರು.
*ಏಳನೆಯ ವಿಭಾಗದವರು;*
ಬಾಯಿಯಲ್ಲಿ ನಾಲಗೆ ಇಲ್ಲದಂತಹ ಸ್ಥಿತಿಯಲ್ಲಿ ಖಬರ್‌ನಿಂದ ಎದ್ದೇಳುವರು. ಅವರ ಬಾಯಲ್ಲಿ ರಕ್ತ ಮತ್ತು ಕೀವು ಹರಿಯುತ್ತಿರುವುದು. ಇವರು ಮನಪೂರ್ವಕ ಸಾಕ್ಷಿಗೆ ನಿಲ್ಲುವವರಾಗಿರುವರು.
*ಎಂಟನೆಯ ವಿಭಾಗ;* ತಲೆ ಕೆಳಗಾದ ಸ್ಥಿತಿಯಲ್ಲಿ ಎದ್ದೇಳುವರು. ಇವರು ವ್ಯಭಿಚಾರ ಎಸಗಿ, ತೌಬಾ ಮಾಡದೆ ಮರಣ ಹೊಂದಿದವರಾಗಿರುವರು.
*ಒಂಭತ್ತನೆಯ ವಿಭಾಗದವರು:* ಕಪ್ಪಡರಿದ ಮುಖ ಹೊತ್ತು ಕಣ್ಣುಗಳು ರೋಗಪೀಡಿತವಾಗಿ ಎದ್ದೇಳುವರು. ಅವರ ಹೊಟ್ಟೆಯು ಬೆಂಕಿಯಿಂದ ತುಂಬಿರುವುದು. ಇವರು ಅನಾಥರ ಸೊತ್ತನ್ನು ಅಕ್ರಮವಾಗಿ ಕಬಳಿಸುವವರಾಗಿರುವರು.
*ಹತ್ತನೇ ವಿಭಾಗದವರು;* ಕುಷ್ಟರೋಗದವರಾಗಿ ಎದ್ದೇಳುವರು. ಇವರು ತಮ್ಮ ಮಾತಾಪಿತರಿಗೆ ಅವಿಧೇಯತೆ ತೋರುತ್ತಾ ಅವರಿಗೆ ಕಿರುಕುಳ ನೀಡುವವರಾಗಿರುವರು.
*ಹನ್ನೊಂದನೆಯ ವಿಭಾಗದವರು;* ಅಂಧರಾಗಿ ಖಬರ್‌ನಿಂದ ಎದ್ದೇಳುವರು. ಅವರ ಹಲ್ಲುಗಳು ದನದ ಕೊಂಬಿನಂತಿರುವುದು. ತುಟಿಯು ಎದೆಯಲ್ಲಿ ನೇತಾಡುತ್ತಿರುವುದು. ಅವರ ನಾಲಗೆಯು ಹೊಟ್ಟೆ ಮತ್ತು ತೊಡೆಗೆ ಜೋತು ಬಿದ್ದಿರುವುದು. ಅವರ ಹೊಟ್ಟೆಯಿಂದ ಮಲವು ಹೊರ ಬರುತ್ತಿರುವುದು. ಇವರು ಮದ್ಯ ಸೇವಿಸುವವರಾಗಿರುವರು.
*ಹನ್ನೆರಡನೆಯ ವಿಭಾಗದವರು;* ಮುಖ ಹದಿನಾಲ್ಕನೆಯ ರಾತ್ರಿಯ ಪೌರ್ಣಮಿ ಚಂದಿರನು ಹೊಳೆಯುವಂತೆ ಖಬ್ರ್‌ನಿಂದ ಎದ್ದೇಳುವರು. ಸಿರಾತ್ ಸೇತುವೆಯನ್ನು ಮಿಂಚಿನಂತೆ ದಾಟುವರು. ಇವರು ನಮಾಝಿಗೆ ವಿಶೇಷ ಮಹತ್ವವನ್ನು ನೀಡುವವರಾಗಿರುವರು. ಇವರು ಪಾಪಗಳಿಂದ ದೂರವಿದ್ದು, ಒಳ್ಳೆಯ ಸತ್ಕರ್ಮಗಳನ್ನು ಮಾಡಿದವರಾಗಿರುವರು. ಇವರು ತೌಬಾ ಮಾಡಿದ ಬಳಿಕವೇ ಮರಣ ಹೊಂದಿದವರಾಗಿರುವರು. ಇವರಿಗೆ ಸ್ವರ್ಗದ ಪ್ರತಿಫಲವಿರುವುದು. ಅಲ್ಲಾಹನು ಇವರ ಮೇಲೆ ಕರುಣೆಯನ್ನು ತೋರುವನು. ಅವರ ಪಾಪಗಳನ್ನು ಮನ್ನಿಸುವನು ಮತ್ತು ಅವರ ಮೇಲೆ ಸಂತೃಪ್ತನಾಗಿರುವನು.
[ದುರ್ರತುನ್ನಾಸ್ವಿಹೀನ್-2-50]

No comments:
Post a Comment