*ಅಜಬ್ ತುಂಬಿದ ಮಿಅ್ ರಾಜ್*
ಪ್ರವಾದಿ (ಸ) ರವರ ಅನೇಕ ಯಾತ್ರೆಗಳಲ್ಲಿ ಅತ್ಯಂತ ಪವಾಡ ತುಂಬಿದ ಹಾಗೂ ಐತಿಹಾಸಿಕವಾದ ಒಂದು ಯಾತ್ರೆಯಾಗಿತ್ತು ಇಸ್ರಾಹ್ - ಮಿಅ್ ರಾಜ್ (ನಿಶಾ ಪ್ರಯಾಣ, ಆಕಾಶರೋಹಣ) . ಹಿಜ್ರಾ ಸಹಿತ ಪ್ರವಾದಿಯವರ ಅನೇಕ ಯಾತ್ರೆಗಳಿಂದ ವ್ಯತ್ಯಸ್ತವಾದ ಇತಿಹಾಸ ಪುಟಗಳಲ್ಲಿ ಎಂದೂ ಮರೆ ಮಾಚಲು ಅಸಾಧ್ಯವಾದ ಒಂದು ಅದ್ಭುತ ಪಯಣ.....
ಇಸ್ಲಾಮಿನ ನೈಜ ಸಂದೇಶದ ಬೋಧನೆಯ ಪ್ರಥಮ ಹಂತವು ಕೊನೆಗೊಂಡಾಗ ಶತ್ರುಗಳ ಅಕ್ರಮ ಹಾಗೂ ಹಿಂಸಾಚಾರಕ್ಕೆ ಶಕ್ತಿ ತುಂಬುವುದರೊಂದಿಗೆ ಕುತಂತ್ರಗಳು ಹಾಗೂ ಅನೈತಿಕ ಚಟುವಟಿಕೆಗಳು ತೀವ್ರಗೊಳ್ಳುವ ಸಂದರ್ಭದಲ್ಲಾಗಿತ್ತು
ದುಃಖ ವರ್ಷವೆಂದು ಚರಿತ್ರೆ ಉಲ್ಲೇಖಿಸುವ ಪ್ರವಾದಿಯವರ ಪ್ರೀತಿಯ ಇಬ್ಬರು ಸಂರಕ್ಷರು ಇಹಲೋಕ ತ್ಯಜಿಸುವುದು. ಈ ಘಟನೆಯ ನಂತರವಾಗಿತ್ತು ಇಸ್ರಾಹ್ - ಮಿಅ್ ರಾಜ್ ಎಂಬ ಅದ್ಭುತ ಪ್ರಯಾಣದ ಹಾದಿ ಪ್ರಾರಂಭಗೊಳ್ಳುವುದು. ಇದು ಜಗತ್ತಿನ ಅತ್ಯಂತ ಅದ್ಭುತವಾದ ಒಂದು ಪ್ರಯಾಣವಾಗಿದೆ. ಕಣ್ಣಿನ ನಯನಗಳಿಗೆ ಸ್ಪರ್ಶಿಸಲಸಾಧ್ಯವಾಗದ ದೂರಕ್ಕೆ ಕಾಲುಗಳನ್ನು ಸ್ಪರ್ಶಿಸಲು ಯೋಗ್ಯವಾದ "ಬುರಾಖ್" ಎಂಬ ವಿಶಿಷ್ಟ ವಾಹನದ ಮೂಲಕ ತನ್ನ ಅತಿಥಿಯಾಗಿ ವಿಶ್ವ ನಾಯಕ ಪ್ರವಾದಿ ಮಹಮ್ಮದ್ (ಸ) ರವರು ಹಾಗೂ ಸಹ ಪ್ರಯಾಣಿಕನಾಗಿ ಜಿಬ್ರೀಲ್ (ಅ) ರವರ ಮೂಲಕ ಒಬ್ಬ ರಾಜನು ತನ್ನ ಪ್ರಿಯತಮೆಯನ್ನು ವಿಶೇಷ ಸಂದೇಶವಾಹಕರೊಂದಿಗೆ ವಿಶ್ವ ಸೃಷ್ಟಿಕರ್ತ ನೊಂದಿಗೆ ಭೇಟಿಯಾಗುವ ಭಾಗವಾಗಿ ಹಬೀಬರನ್ನು ತನ್ನತ್ತ ಕರೆ ತರಲು ಕಳುಹಿಸುತ್ತಾರೆ.
ಮಸ್ಜಿದುಲ್ ಹರಾಮಿನ ಪರಿಸರದಲ್ಲಿ ಉಮ್ಮ ಹಾನಿಅ್ ( ರ) ರವರ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಪ್ರವಾದಿಯವರನ್ನು ಕರೆದು ಝಂ ಝಂ ಭಾವಿಯ ಸಮೀಪ ಕೊಂಡೊಯ್ದು ಮಲಕುಗಳ ನೇತೃತ್ವದಲ್ಲಿ ಅವರ ಎದೆಯನ್ನು ಹರಿದು ಕೆಲವೊಂದು ಭಾಗಗಳನ್ನು ಹೊರಹಾಕಿ ಝಂಝಂ ನೀರಿನಿಂದ ಅವುಗಳನ್ನು ತೊಳೆದು ಇಮಾನ್ ಹಾಗೂ ಹಿಕ್ಮತ್ ಗಳಿಂದ ಅವುಗಳನ್ನು ಶುದ್ಧೀಕರಿಸುವ ಮೂಲಕ ಅಲ್ಲಾಹನತ್ತ ಪ್ರಯಾಣಕ್ಕೆ ಅವರನ್ನು ಸಿದ್ಧಪಡಿಸಿದರು. ಪ್ರಯಾಣದ ಈ ಸಿದ್ಧತೆಯೇ ಅದರ ಅದ್ಭುತ, ಅಸಾಧಾರಣ ಸ್ವರೂಪವನ್ನು ಬಹಿರಂಗಪಡಿಸುತ್ತದೆ.
*ಇಸ್ರಾಅ್ ( ರಾತ್ರಿ ಪಯಣ)*
ಮಕ್ಕಾದ ಮಸ್ಜಿದುಲ್ ಹರಾಮಿನಿಂದ ( ಮಕ್ಕಾದಿಂದ 1400 ಕಿ. ಮೀ ದೂರದಲ್ಲಿರುವ) ಪ್ಯಾಲೆಸ್ತೀನಿನ ಖುದ್ ಸ್ ನಗರದಲ್ಲಿರುವ ಮಸ್ಜಿದುಲ್ ಅಖ್ಸಾ ಕ್ಕೆ ಪ್ರವಾದಿಯವರನ್ನು ಸರ್ವಶಕ್ತನಾದ ಅಲ್ಲಾಹನು ಒಂದು ರಾತ್ರಿಯ ನಿರ್ದಿಷ್ಟ ಅವಧಿಯೊಳಗೆ ಆಹ್ವಾನಿಸಿ, ನಂತರ ಮರಳಿ ಕಳುಹಿಸಿದ ಸಂದರ್ಭವನ್ನಾಗಿದೆ ಇಸ್ಲಾಮಿನಲ್ಲಿ ತಾಂತ್ರಿಕವಾಗಿ ಇಸ್ರಾಅ್ ಎಂದು ಕರೆಯುವುದು.
*ಮಿಅ್ ರಾಜ್ (ಆಕಾಶರೋಹಣ)*
ಬೈತಲ್ ಮುಖದ್ದಸಿನಿಂದ ಏಳು ಆಕಾಶದತ್ತ ಹಾಗೂ ಅದರಾಚೆಗೂ ಅಂದರೆ ಯಾರಿಗೂ ಪ್ರವೇಶಿಸಲಸಾಧ್ಯವಾದ ಆಕರ್ಷಣೀಯವಾದ ಪ್ರದೇಶಗಳಿಗೆ ಅಲ್ಲಾಹನು ತನ್ನ ಅತಿಥಿಯನ್ನು ಕರೆದೊಯ್ದನು. ಹಾಗೂ ಬಾನ ಲೋಕದಲ್ಲಿ ನಮಾಜ಼್ ಸಹಿತ ಹಲವು ಉಡುಗೋರೆಗಳನ್ನೂ ಇನ್ನಿತರ ಅದ್ಭುತ ದೃಶ್ಯಗಳನ್ನೂ ತೋರಿಸಿದ ನಂತರ ಮರಳಿ ಬೈತುಲ್ ಮುಖದ್ದಸಿಗೆ ಸುಖ ಪ್ರಯಾಣದ ಮೂಲಕ ಮರಳಿ ಕಳುಹಿಸಿದನು. ಇದನ್ನು ಮಿಅ್ ರಾಜ್ ಎಂದು ಬಣ್ಣಿಸಿದ್ದಾರೆ.
ಮಕ್ಕಾದಿಂದ ಬೈತುಲ್ ಮುಖದ್ದ ಸ್ ಯಾತ್ರೆಯ ಮಧ್ಯೆ ಹಲವಾರು ಅದ್ಭುತ ಪವಾಡ ಘಟನೆಗೆ ಸಾಕ್ಷಿಯಾದ ಪ್ರವಾದಿ (ಸ) ರವರು ಅದರ ಎಲ್ಲಾ ನೇರ ವರದಿಗಳು ಹಾಗೂ ಮಾಹಿತಿಗಳನ್ನು ತಕ್ಷಣವೇ ಕೇಳಿ ಪಡೆಯುತ್ತಿದ್ದರು. ಯಾತ್ರೆಯ ಮಧ್ಯೆ ಮೊದಲನೆಯದಾಗಿ ಕಂಡದ್ದು ಕೃಷಿ ಬಿತ್ತುವ ಒಂದು ವಿಭಾಗವನ್ನಾಗಿತ್ತು. ಕೃಷಿ ಬಿತ್ತುವ ಅದೇ ದಿನ ಅದರ ಬೆಳೆಗಳನ್ನೂ ತೆಗೆಯಲಾಗುತ್ತಿತ್ತು. ತಕ್ಷಣ ಮುಂದಿನ ಬೆಳೆ ಪ್ರತ್ಯಕ್ಷವಾಗುತ್ತಿತ್ತು. ಇದನ್ನು ಕಂಡ ಪ್ರವಾದಿಯವರು ಇದರ ಬಗ್ಗೆ ವಿಚಾರಿಸಿದಾಗ ತಮಗೆ ಲಭ್ಯವಾದ ಪ್ರತಿಕ್ರಿಯೆ ಇದಾಗಿತ್ತು: ಅವರು ಅಲ್ಲಾಹನ ಮಾರ್ಗದಲ್ಲಿ ನೀತಿವಂತರಾಗಿ ಹೋರಾಡಿದ ವೀರ ಶೂರರಾಗಿದ್ದಾರೆ ಒಬ್ಬನು ಒಂದು ಒಳ್ಳೆಯ ಒಳಿತನ್ನು ಮಾಡಿದರೆ ಅದಕ್ಕೆ ಬದಲಾಗಿ ಅಲ್ಲಾಹನು 700 ಪಟ್ಟು ಪ್ರತಿಫಲ ನೀಡುವನೆಂಬುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ.
2) ಎರಡನೆಯದಾಗಿ ಕಂಡದ್ದು ಬಂಡೆ ಕಲ್ಲಿನಿಂದ ತಮ್ಮ ತಲೆಯನ್ನು ತಾವೇ ಹೊಡೆದು ಹಾಕುತ್ತಿರುವ ಒಂದು ಜನರ ಗುಂಪಾಗಿತ್ತು. ಆದರೆ ಅದ್ಭುತವೆಂದರೆ.. ಆ ಹೊಡೆದು ಹೋದ ತಲೆಗಳು ಮರಳಿ ಅವುಗಳ ಮೂಲ ಆಕಾರಕ್ಕೆ ಬರುತ್ತಿರುವುದು , ಅವು ಮತ್ತೆ ಹೊಡೆದು ಹಾಕುವರು, ಇದು ಮುಂದುವರೆಯುತ್ತಲೇ ಇರುವುದನ್ನು ಕಂಡಾಗ ಇದರ ಕುರಿತು ವಿವರಣೆ ಕೇಳಿದರು ಜಿಬ್ರೀಲ್ (ಅ) ಹೇಳಿದರು: ಕಡ್ಡಾಯವಾದ ದೈನಂದಿನ ನಮಾಜ್ ನಿರ್ವಹಿಸಲು ಸಜ್ಜರಾಗದೆ ದುರಹಂಕಾರದಿಂದ ನಡೆಯುವವರಿಗೆ ಇರುವ ಅಲ್ಲಾಹನ ಶಿಕ್ಷೆಯಾಗಿದೆ ಇದು.
3) ಜಿಬ್ರೀಲ್ ತೋರಿಸಿದ ಮತ್ತೊಂದು ವಿಭಾಗದವರಿಗೆ ಇಳಿದ ಶಿಕ್ಷೆ ಇದಾಗಿತ್ತು. ಸರಿಯಾಗಿ ಜ಼ಕಾತ್ ಪಾವತಿಸದವರು ಅವರು ತಮ್ಮ ಗುದ ದ್ವಾರಗಳನ್ನು ಚಿಂದಿ ಬಟ್ಟೆಗಳಿಂದ ಮುಚ್ಚಿ ಪ್ರಾಣಿಗಳಂತೆ ಮೇಯುತ್ತಾ ಇರುವ ದೃಶ್ಯವಾಗಿತ್ತು. ಅವರು ಮುಳ್ಳಿನ ಗಿಡಗಳು, ನರಕ ವೃಕ್ಷವಾದ ಝಕ್ಕೂಂ ಹಾಗೂ ಬೆಂದೊರಗಿರುವ ಕಲ್ಲುಗಳನ್ನು ತಿನ್ನುತ್ತಿದ್ದರು.
4) ಜಿಬ್ರೀಲ್ ಹಾಗೂ ಪ್ರವಾದಿ (ಸ)ರವರು ಹೋಗಿ ತಲುಪುವುದು ಮತ್ತೊಂದು ಜನ ವಿಭಾಗದ ಸಮೀಪದಲ್ಲಾಗಿತ್ತು. ಅವರ ಮುಂದೆ ಚೆನ್ನಾಗಿ ಬೇಯಿಸಿದ ಮಾಂಸವನ್ನು ಇಟ್ಟರೂ ಅದನ್ನು ಮುಟ್ಟದೆ ಸಮೀಪದಲ್ಲಿರುವ ಬೇಯಿಸದ ಕೊಳೆತ ಮಾಂಸವನ್ನಾಗಿದೆ ಅವರು ತಿನ್ನುವುದು. ಅದರ ಬಗ್ಗೆ ಪ್ರವಾದಿಯವರು ವಿಚಾರಿಸಿದಾಗ ತನಗೆ ಲಭ್ಯವಾದ ವಿವರಣೆ ಇದಾಗಿತ್ತು: ತಮ್ಮ ಸಮುದಾಯದಲ್ಲಿ ಕಾನೂನು ಬದ್ಧವಾಗಿ ವಿವಾಹಿತ ವಧು / ವರ ಇರುವಾಗ , ಅವರನ್ನು ಬಿಟ್ಟು ಬೇರೆ ಪುರುಷ / ಮಹಿಳೆಯರೊಂದಿಗೆ ಲೈಂಗಿಕ ಸಂಬಂಧದಲ್ಲಿ ಏರ್ಪಡುವವರಿಗಿರುವ ಶಿಕ್ಷೆಯಾಗಿದೆ ಇದು.
5) ನಂತರ ಪ್ರವಾದಿಯವರು ಕಾಣುವ ದೃಶ್ಯವೇನೆಂದರೆ ಬಹುದೊಡ್ಡ ಸೌದೆ ರಾಶಿಯ ಬಳಿ ನಿಂತಿರುವ ಒಬ್ಬ ವ್ಯಕ್ತಿಯನ್ನಾಗಿದೆ. ತನ್ನ ಮುಂದಿರುವ ಸೌದೆಗಳನ್ನು ಹೊತ್ತುಕೊಂಡು ಹೋಗಲು ಅಸಾಧ್ಯವಾದರೂ ಅವನು ಇನ್ನಷ್ಟು ಸೌದೆಗಳನ್ನು ಸಂಗ್ರಹಿಸುವುದನ್ನು ಮುಂದುವರಿಸುತ್ತಲೇ ಇರುತ್ತಾನೆ ಇವನು ಯಾರು? ಉತ್ತರ ಇದಾಗಿತ್ತು : ಓ ಪ್ರವಾದಿ ವರ್ಯರೇ ಇದು ತಮ್ಮ ಉಮ್ಮತಿನಲ್ಲಿರುವ ಕೆಲವರ ಪರಿಸ್ಥಿತಿಯಾಗಿದೆ, ಅವರು ಜನಸಾಮಾನ್ಯರ ನಂಬಿಕೆಗಳು ಮತ್ತು ಬಾಧ್ಯತೆಗಳನ್ನು ವಹಿಸಿಕೊಂಡಿದ್ದಾರೆ ಆದರೆ ಅವುಗಳನ್ನು ಸರಿಯಾಗಿ ನಿರ್ವಹಿಸಲಾಗದೆ ಮತ್ತೆ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಿದ್ದಾರೆ. ಇದು ಅವರಿಗಾಗಿ ಕಾಯುವ ಪರಿಸ್ಥಿತಿಯಾಗಿದೆ. ಪ್ರಯಾಣ ಮುಂದುವರಿಯಿತು...
6) ನಂತರ ಒಂದು ಭಯಾನಕ ದೃಶ್ಯ ಕಂಡರು ಒಂದು ವಿಭಾಗ ಜನರು ಅವರು ಕಬ್ಬಿಣದ ಕತ್ತರಿಗಳಿಂದ ತಮ್ಮ ನಾಲಿಗೆ ಹಾಗೂ ತುಟಿಗಳನ್ನು ಕತ್ತರಿಸಿ ಕೊಳ್ಳುತ್ತಿದ್ದಾರೆ, ಕ್ರಮೇಣ ಅದು ಚೇತರಿಸಿಕೊಳ್ಳುತ್ತಿದೆ ಆದರೆ ಮತ್ತೆ ಅವುಗಳನ್ನು ಅವರು ಕತ್ತರಿಸುವರು. ವಿನಾಶದ ಬಗ್ಗೆ ಬೋಧಿಸುವವರು ಎಂದು ಪ್ರವಾದಿಯವರಿಗೆ ಜಿಬ್ರೀಲ್ (ಅ) ತಿಳಿಸಿ ಕೊಡುತ್ತಾರೆ. ಹೀಗೆ ಅನೇಕ ಅನುಭವಗಳು ಮತ್ತು ದೃಶ್ಯಗಳನ್ನು ಕಣ್ಣಾರೆ ಕಂಡು ಹಲವು ಪ್ರತ್ಯಕ್ಷ ಅನುಭವಗಳ ಮೂಲಕ ಆ ಪ್ರಯಾಣವು ಮುಂದೆ ಸಾಗಿತು.
ಯಾತ್ರೆಯ ತಾತ್ಕಾಲಿಕ ವಿರಾಮ ಬೈತಲ್ ಮುಖದ್ದಸ್ ಆಗಿತ್ತು ಅಲ್ಲಿಗೆ ತಲುಪಿದ ಕೂಡಲೇ ಮಸೀದಿಗೆ ಪ್ರವೇಶಿಸಿ ಅಲ್ಲಿ ಉಪಸ್ಥಿತರಿದ್ದ ಇತರ ಪ್ರವಾದಿಗಳು ಹಾಗೂ ಮಲಕುಗಳೊಡನೆ ನಮಾಜಿ಼ಗೆ ನೇತೃತ್ವ ವಹಿಸಿದರು . ತದನಂತರದ ಸಾಹಸಿಕ ಯಾತ್ರೆಯಾಗಿದೆ ಆಕಾಶ ರೋಹಣ ಅಥವಾ ಮಿಅ್ ರಾಜ್.
ಹೀಗೆ ಜಿಬ್ರೀಲ್ (ಅ) ಪ್ರವಾದಿಯವರನ್ನು ಬೈತುಲ್ ಮುಖದ್ದಸಿನಿಂದ ಬಾನಲೋಕಕ್ಕೆ ಕರೆದೊಯ್ದರು ಪ್ರತಿಯೊಂದು ಆಕಾಶ ಮಂಡಲಕ್ಕೆ ತಲುಪುವಾಗಲು ಅಲ್ಲಿನ ಕಾವಲುಗಾರರೊಂದಿಗೆ ಅನುಮತಿ ಸೂಚಿಸಿದರು ಪ್ರವೇಶನ ದ್ವಾರವನ್ನು ತೆರೆಯಲು ಅನುಮತಿ ಕೋರಿ ತಾನು ಜಿಬ್ರೀಲ್ ಎಂದು ಹೇಳುವಾಗ ಮತ್ತೊಂದು ಕಡೆಯಿಂದ ಪ್ರಶ್ನೆ... ನಿಮ್ಮೊಂದಿಗೆ ಯಾರು ? ಪ್ರವಾದಿ ಮಹಮ್ಮದ್ ಎಂದು ಜಿಬ್ರೀಲ್. ಈ ಸಮಯದಲ್ಲಿ ಇಲ್ಲಿಂದ ಹೊರಡಲು ನಿಮಗೆ ಸೂಚನೆ ನೀಡಲಾಗಿದೆಯೇ...? ಎಂಬ ಪ್ರಶ್ನೆ, ಹೌದು ಎಂದು ಜಿಬ್ರೀಲ್. ನಂತರ ಶುಭಾಶಯ ವಚನಗಳೊಂದಿಗೆ ಪ್ರವೇಶನಕ್ಕೆ ಅನುಮತಿ ನೀಡಲಾಗುತ್ತದೆ ಹೀಗೆ ಏಳು ಆಕಾಶಗಳನ್ನು ದಾಟಿ ಮುಂದೆ ಹೋಗುವರು.
ಹೀಗೆ ಒಂದನೆೇ ಆಕಾಶದತ್ತ ಪ್ರವೇಶಿಸಿದಾಗ ಅಲ್ಲೊಂದು ಮನುಷ್ಯನನ್ನು ದರ್ಶಿಸಿದರು ಅವನ ಬಲ ಬಾಗಿಲಿನಿಂದ ಸುಗಂಧ ಹಾಗೂ ಎಡ ಬಾಗಿಲಿನಿಂದ ದುರ್ವಾಸನೆಯು ಹೊರಹೊಮ್ಮುತ್ತಿದೆ, ಬಲಕ್ಕೆ ನೋಡುವಾಗ ನಗುತ್ತಾ ಸಂತೋಷಪಡುವವನು ಎಡಕ್ಕೆ ನೋಡುವಾಗ ದುಖ್ಖಿತನಾಗಿ ಖಿನ್ನತೆಗೆ ಒಳಗಾಗುತ್ತಿದ್ದಾನೆ ಪ್ರವಾದಿಯವರು ಇದರ ಬಗ್ಗೆ ಕೇಳಿದರು ಜಿಬ್ರೀಲ್ ರವರ ಉತ್ತರ ಹೀಗಿತ್ತು : ಅವರು ನಿಮ್ಮ ತಂದೆಯಾದ ಆದಂ ನಬಿ (ಅ) ರವರಾಗಿದ್ದಾರೆ. ಬಲಭಾಗದಲ್ಲಿರುವ ಸ್ವರ್ಗದ ದ್ವಾರದ ಮೂಲಕ ಹಾದು ಹೋಗುವವರನ್ನು ನೋಡಿ ಸಂತೋಷಪಡುವವನು ಅವರು ತನ್ನ ಎಡ ಭಾಗದಲ್ಲಿ ನರಕದ ದ್ವಾರದ ಮೂಲಕ ಹಾದು ಹೋಗುವವರನ್ನು ನೋಡುವಾಗ ದುಃಖದಿಂದ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.
ನಂತರ ಅವರಿಬ್ಬರೂ ಎರಡನೇ ಆಕಾಶದತ್ತ ಸಾಗಿದರು ಅಲ್ಲಿ ಇಬ್ಬರು ಯುವಕರನ್ನು ಕಂಡರು ಇವರ ಬಗ್ಗೆ ಕೇಳಿದಾಗ ಜಿಬ್ರೀಲ್ (ಅ) ಹೇಳಿದರು ಇವರು ತಮ್ಮ ಮಾತೃ ಸಹೋದರಿಯ ಪುತ್ರರಾದ ಝಕರಿಯಾ ನಬಿ ಹಾಗೂ ಈಸಾ ನಬಿ (ಅ) ರವರಾಗಿದ್ದಾರೆ. ಪ್ರಯಾಣ ಮುಂದುವರಿಯಿತು ಮೂರನೇ ಆಕಾಶದಲ್ಲಿ ಯೂಸುಫ್ ನಬಿ (ಅ) ನಾಲ್ಕನೇ ಆಕಾಶದಲ್ಲಿ ಇದ್ರೀಸ್ ನಬಿ (ಅ) ಐದನೇ ಆಕಾಶದಲ್ಲಿ ಹಾರೂನ್ ನಬಿ ಮತ್ತು ಮೂಸಾ ನಬಿ (ಅ) ರವರನ್ನು ಕಂಡರು. ಹೀಗೆ ಏಳನೇ ಹಾಗೂ ಕೊನೆಯ ಆಕಾಶದತ್ತ ಸಾಗಿದಾಗ ನರಕವಾಸಿಯಾಗಿದ್ದ ಒಬ್ಬ ವ್ಯಕ್ತಿ ಸ್ವರ್ಗದ ದ್ವಾರದ ಕುರುಚಿಯ ಮೇಲೆ ಕುಳಿತಿರುವುದನ್ನು ನೋಡಿದರು ಇದರ ಬಗ್ಗೆ ಜಿಬ್ರೀಲ್ (ಅ) ವಿವರಿಸಿದರು: ಇವರು ಪ್ರವಾದಿ ಇಬ್ರಾಹಿಂ ನೆಬಿಯವರಾಗಿದ್ದಾರೆ. ಇಲ್ಲಿ ಇವರು ನರಕವಾಸಿ ಎಂದು ಹೇಳಲು ಕಾರಣ ಪರಲೋಕದ ನರಕಕ್ಕೆ ಸಂಯೋಜಿಸಲ್ಪಟ್ಟದಲ್ಲ , ಬದಲಾಗಿ ಪ್ರಥಮವಾಗಿ ಭೂಮಿಯ ನರಕವೆಂಬ ಅಗ್ನಿ ಹೊಂಡಕ್ಕೆ ಎಸೆಯಲ್ಪಟ್ಟ ವ್ಯಕ್ತಿಯಾಗಿದ್ದಾರೆ ಎಂದಾಗಿದೆ.
ಹೀಗೆ ಏಳು ಆಕಾಶಗಳನ್ನು ಭೇಟಿಯಾದ ನಂತರ ಪ್ರಯಾಣವು ಸಿದ್ರತುಲ್ ಮುಂತಹಾದತ್ತ ಮುಂದುವರೆಯಿತು . ಸಿದ್ರತುಲ್ ಮುಂತಹಾವೆಂದರೆ ಸಮುದಾಯದ ಪ್ರತಿಯೊಬ್ಬರ ಸತ್ಕರ್ಮಗಳು ಬಂದು ತಲುಪುವ ಒಂದು ವೃಕ್ಷವಾಗಿದೆ ಈ ವೃಕ್ಷದ ಎಲೆಗಳು ಮತ್ತು ಹಣ್ಣುಗಳ ಬಗ್ಗೆ ಪರಿಶುದ್ಧ ಖುರ್ ಆನಿನಲ್ಲಿ ಅನೇಕ ಶ್ಲೋಕಗಳಿವೆ. ಆ ಬೃಹತ್ ವೃಕ್ಷದ ಕೆಳಗೆ ಕಲ ಬೆರೆಕೆಗಳಿಲ್ಲದ ಶುದ್ಧವಾದ ಜಲ ರುಚಿ ವ್ಯತ್ಯಾಸವಿಲ್ಲದ ಹಾಲು, ಮದ್ಯ ಹಾಗೂ ಜೇನುತುಪ್ಪದ ಬೊಗ್ಗೆಗಳು ಹರಿಯುತ್ತಿದೆ, 70 ವರ್ಷಗಳ ಕಾಲ ಪ್ರಯಾಣಿಸುವ ಒಬ್ಬ ಸವಾರನಿಗೆ ನೆರಳು ನೀಡಬಲ್ಲ ಪವಾಡ ಸದೃಶ ಮರ. ಇಬ್ನು ಅಬ್ಬಾಸ್ (ರ)ರವರ ಸಹಿತ ಹಲವು ಪ್ರಮುಖ ವ್ಯಾಖ್ಯಾನಗಾರರ ಪ್ರಕಾರ ಮಲಕುಗಳಿಗೆ ಇಲ್ಲಿಯವರೆಗೆ ಮಾತ್ರ ತೆಗೆಯಬಲ್ಲರು ಅದನ್ನು ಮೀರಿ ಪ್ರವೇಶಿಸಲು ಅವರಿಗೂ ಅನುಮತಿ ಇಲ್ಲ.
ಸಿದ್ರತುಲ್ ಮುಂತಹ ಅಲ್ಲಾಹನ ಪ್ರಕಾಶದಿಂದ ಅಲಂಕರಿಸಲ್ಪಟ್ಟಿತು. ವಿಶ್ವದ ಒಡೆಯ ತನ್ನ ಪ್ರಿಯತಮನಾದ ಪ್ರವಾದಿಯವರನ್ನು ಇನ್ಯಾರಿಗೂ ನೀಡದ ಅದ್ಭುತ ಸೌಭಾಗ್ಯವನ್ನು ನೀಡಿ ತನ್ನತ್ತ ಕರೆಸಿಕೊಂಡ ಆ ಕ್ಷಣವನ್ನು ಪ್ರವಾದಿಯವರಿಗೆ ಯಾವತ್ತೂ ಮರೆಯಲ ಸಾಧ್ಯವಾಗದ ಒಂದು ಕ್ಷಣವಾಗಿತ್ತು. ಒಬ್ಬ ವಿಶ್ವಾಸಿಗೆ ತನ್ನ ಜೀವಮಾನದಲ್ಲಿ ಸಿಕ್ಕಿದ ಏಕೈಕ ಅದ್ಬುತ ಸಂತೋಷದ ಕ್ಷಣವಾಗಿತ್ತು ಅದು. ಆ ಸ್ಥಳವನ್ನೋ ಆ ಸಂದರ್ಭವನ್ನೋ ವರ್ಣಿಸಲು ನನ್ನಿಂದ ಅಸಾಧ್ಯ ಎಂದು ಪ್ರವಾದಿಯವರೇ ಸ್ವತಃ ಹೇಳಿದ್ದಾರೆ. ಈ ಸಂಭಾಷಣೆಯ ಸಂದರ್ಭದಲ್ಲಿ ಪ್ರವಾದಿಯವರಿಗೆ ಬೇಕಾದುದ್ದನ್ನು ಕೇಳಿ ಪಡೆಯಿರಿ ಎಂದು ಅಲ್ಲಾಹನು ಹೇಳಿದಾಗ ತಮ್ಮ ಪೂರ್ವಜನರಾದ ಪ್ರವಾದಿಯವರಿಗೆ ನೀಡಲಾದ ಅನೇಕ ಮಹತ್ವಗಳನ್ನು ವಿವರಿಸಿದೆಯೇ ಹೊರತು ತನಗಾಗಿ ಏನನ್ನು ಕೇಳಲು ಅವರು ಬಯಸಲಿಲ್ಲ ಈ ಮೂಲಕ ಜಗತ್ತಿಗೆ ಶ್ರೇಷ್ಠ ಸಂಸ್ಕೃತಿ ಮತ್ತು ಗೌರವವನ್ನು ಪ್ರವಾದಿಯವರು ಸಮರ್ಪಿಸಿದರು. ಏನನ್ನು ಕೇಳದೆ ಪಡೆಯದ ತನ್ನ ಪ್ರಿಯನಿಗೆ ಅಲ್ಲಾಹನು ಸ್ನೇಹ ಭಾಜನವಾಗಿ ಉಡುಗೊರೆಯಾಗಿ ಎಲ್ಲವನ್ನು ಕೊಡಲು ಸಿದ್ದನಾದನು.
ಅಲ್ಲಾಹನು ಪ್ರವಾದಿಯವರಲ್ಲಿ ಹೇಳಿದರು: ತಮ್ಮ ಹೃದಯವನ್ನು ನಾನು ಶುದ್ಧೀಕರಿಸಿದ್ದೇನೆ ಹಾಗೂ ಪಾಪಮುಕ್ತನನ್ನಾಗಿ ಮಾಡಿದ್ದೇನೆ , ನನ್ನ ನಾಮಗಳು ಪ್ರಸ್ತಾಪವಾದಾಗೆಲ್ಲಾ ನಿಮ್ಮ ನಾಮವು ಪ್ರಸ್ತಾಪವಾಗುತ್ತದೆ, ತಮ್ಮ ಸಮುದಾಯವನ್ನು ಒಂದು ಶ್ರೇಷ್ಠ ಸಮುದಾಯವನ್ನಾಗಿ ಮಾಡಿದ್ದೇನೆ. ತಾವು ನನ್ನ ಸಂದೇಶವಾಹಕರಾಗಿದೆ ಎಂದು ಸಾಕ್ಷಿ ಹೇಳದ ಎಂದು ನುಡಿಯದ ಯಾವುದೇ ಅನುಯಾಯಿಯನ್ನು ನಾನು ಸ್ವೀಕರಿಸಲಾರೆ, ಪ್ರಥಮವಾಗಿ ಸೃಷ್ಟಿಸಿರುವುದು ತಮ್ಮ ಪ್ರಕಾಶವಾಗಿದೆ, ಪರಲೋಕದಲ್ಲಿ ಮೊದಲನೆಯ ತೀರ್ಪು ತಮಗಾಗಿದೆ, ಹಾಗೂ ತಮಗಾಗಿ ಫಾತಿಹಾವನ್ನು ಕೂಡ ನಾನು ಆರಿಸಿದ್ದೇನೆ ,ಏಳು ಪುನರಾವರ್ತಿತ ವಚನಗಳನ್ನು ಒಳಗೊಂಡ ಈ ಸೂಕ್ತವು ಬೇರೆ ಯಾವುದೇ ಪ್ರವಾದಿಯವರಿಗೆ ನೀಡಲಿಲ್ಲ. ಹೀಗೆ ಹಲವು ಸಂಭಾಷಣೆಯ ನಂತರ ತಮ್ಮ ಸಮುದಾಯಕ್ಕೆ ನಮಾಜ಼್ ಅನ್ನು ಕಡ್ಡಾಯಗೊಳಿಸಿದನು ಐವತ್ತು ರಕ್ಅತ್ ಗಳಿದ್ದರೂ ಪ್ರವಾದಿ ಮೂಸ ನೆಬಿಯವರ ಹಸ್ತಕ್ಷೇಪದಿಂದ ಅದನ್ನು ಐದಕ್ಕೆ ಇಳಿಸಲಾಯಿತು. ಹೀಗೆ ಹಲವು ಮಾತುಕತೆಗಳು ಜೊತೆಗೆ ಇನ್ನೂ ಅನೇಕ ಘಟನೆಗಳಿಗೆ ಈ ಯಾತ್ರೆಯು ಸಾಕ್ಷಿಯಾಯಿತು. ಹಲಾಲ್ ಅನ್ನು ನಿರ್ಲಕ್ಷ್ಯ ಮಾಡಿ ಹರಾಮನ್ನು ಸೇವಿಸಿದವರು, ಬಡ್ಡಿ ಉಪಯೋಗಿಸುವವರು ,ಅನಾಥರ ಸಂಪತ್ತನ್ನು ವಶಪಡಿಸಿಕೊಂಡವರು, ಮತ್ತು ಲೈಂಗಿಕ ಅನಾಚಾರಗಳನ್ನು ಮಾಡುವವರ ಶಿಕ್ಷೆಯನ್ನು ಕಣ್ಣಾರೆ ಕಂಡರು ಎಂದು ಹದೀಸುಗಳಲ್ಲಿ ವರದಿಯಾಗಿದೆ . ಇವರೆಲ್ಲರೂ ಭೀಕರವಾದ ಭಯಾನಕ ಅವಸ್ಥೆಯಲ್ಲಿ ಇರುತ್ತಾರೆ. ಪ್ರತಿದಿನ 70000 ದಷ್ಟು ಮಲಕುಗಳು ಭೇಟಿ ನೀಡುವ ಬೈತಲು ಮಅ್ ಮೂರಿಗೂ ಪ್ರವಾದಿಯವರು ಸಂದರ್ಶಿಸಿದರು.
ಹೀಗೆ ಮಸ್ಜಿದುಲ್ ಹರಾಮ್ ನಿಂದ ಬೈತಲ್ ಮುಖದ್ದಸ್ ಗೆ ನಂತರ ಏಳು ಆಕಾಶಗಳಿಗೂ ಇತರ ಪ್ರಮುಖ ಸ್ಥಳಗಳಿಗೂ ಭೇಟಿ ನೀಡಿದ ನಂತರ ಅದೇ ರಾತ್ರಿ ಮುಂಜಾನೆ ಹೊತ್ತಿಗೆ ತಾನು ಮಲಗಿದ್ದ ಅದೇ ಸ್ಥಳಕ್ಕೆ ಮರಳಿದರು. ಮಕ್ಕಾದ ಜನರಿಗೆ ತಮ್ಮ ಅನುಭವಗಳನ್ನು ತಿಳಿಸಿದರೆ ಅವರು ತಮ್ಮನ್ನು ಅಪಹಾಸ್ಯ ಮಾಡುತ್ತಾರೆಂದು ಪ್ರವಾದಿಯವರಿಗೆ ಖಚಿತವಾಗಿತ್ತು. ಈ ವಿಷಯ ತಿಳಿದ ಅಬು ಜಹಲ್ ಪ್ರವಾದಿ ಯವರನ್ನೂ ಇಸ್ಲಾಂ ಧರ್ಮವನ್ನೂ ಹಾಗೂ ವಿಶ್ವಾಸಿಗಳನ್ನು ಅಪಹಾಸ್ಯ ಮಾಡಲು ಇದೊಂದು ಅವಕಾಶವಾಗಿ ಉಪಯೋಗಿಸತೊಡಗಿದನು. ಜನರನ್ನು ತನ್ನತ್ತ ಹಾಜರುಪಡಿಸಿ ಪ್ರವಾದಿಯವರು ತಮ್ಮ ಅನುಭವಗಳನ್ನು ಸವಿಸ್ತಾರವಾಗಿ ಅವರೊಂದಿಗೆ ಹಂಚಿಕೊಂಡರು ಅಲ್ಲಾಹನ ಸಹಾಯದೊಂದಿಗೆ ಯಾತ್ರೆಯ ವಿವರಣೆಗಳನ್ನು ನಿಖರವಾಗಿ ವಿವರಿಸಿದರು .ಆದರೂ ಕೆಲವರು ಇದನ್ನು ನಿರ್ಲಕ್ಷಿಸಿದರು ಅಬೂಬಕ್ಕರ್ (ರ) ರವರು ಈ ಸಾಹಸಿಕ ಯಾತ್ರೆ ಹಾಗೂ ಅನುಭವಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರು. ಆದ ಕಾರಣ ಅವರು' ಸಿದ್ದೀಖ್ ' ಎಂಬ ನಾಮದೊಂದಿಗೆ ವಿಖ್ಯಾತರಾದರು.
ಪುಣ್ಯ ಪ್ರವಾದಿ (ಸ) ರವರನ್ನು ಈ ಅದ್ಭುತ ಪ್ರಯಾಣಕ್ಕೆ ಕರೆದೊಯ್ಯುವುದರ ಹಿಂದೆ ಅಲ್ಲಾಹನಿಗೆ ಹಲವು ಉದ್ದೇಶಗಳಿವೆ. ಸೂರ ಅಲ್ ಇಸ್ರಾದ ಮೊದಲನೆಯ ಸೂಕ್ತದಲ್ಲಿ ಅಲ್ಲಾಹನು ಹೇಳುತ್ತಾನೆ: "ನನ್ನ ಅದ್ಭುತ ದೃಶ್ಯಗಳಿಂದ ಕೆಲವೊಂದು ತೋರಿಸುವ ಕಾರಣವಾಗಿದೆ ಈ ಪ್ರಯಾಣ" ಆದ್ದರಿಂದ ನಾವು ಈ ಪ್ರಯಾಣವನ್ನು ಕೇವಲ ವೈಯಕ್ತಿಕ ಮತ್ತು ಸಾಮಾನ್ಯ ಘಟನೆಯಾಗಿ ಅರ್ಥ ಮಾಡಬಾರದು. ಈ ಪ್ರಯಾಣವು ಸೂಚಿಸುವ ಮತ್ತೊಂದು ಪ್ರಧಾನ ವಿಷಯವೆಂದರೆ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರವರು ಪೂರ್ವ ಮತ್ತು ಪಶ್ಚಿಮ (ಬಾಹ್ಯ ಮತ್ತು ಆಂತರಿಕ( ಪ್ರಪಂಚಗಳ ಸಾರಥಿ. ಅವರು ಹಿಂದಿನ ತಲೆಮಾರಿನ ಪ್ರವಾದಿಗಳ ಪರಿಪೂರ್ಣ ಉತ್ತರಾಧಿಕಾರಿ ಮತ್ತು ಮುಂದಿನ ಪೀಳಿಗೆಗಳ ನಾಯಕ. ಮಾನವ ಕುಲವನ್ನು ನೈಜ ಇಸ್ಲಾಮಿನ ಸಂದೇಶದತ್ತ ಕರೆತರಲು ನಿಯೋಜಿಸಿದ್ದ ಹೆಚ್ಚಿನ ಸಂದೇಶವಾಹಕರ ಆಧ್ಯಾತ್ಮಿಕ ನೆಲೆ ಬೈತುಲ್ ಮುಖದ್ದಸಾಗಿತ್ತು. ಆದರೆ ಪ್ರವಾದಿ (ಸ) ರವರಿಂದ ಲೋಕಾಂತ್ಯದವರೆಗಿನ ವಿಶ್ವಾಸಿಗಳ ಖಿಬ್ ಲ ಅದು ಪರಿಶುದ್ಧ ಕಅ್ ಬ ಆಗಿದೆ. ಕಅ್ ಬ ಮತ್ತು ಬೈತುಲ್ ಮುಖದ್ದಸ್ ಸಂಯೋಜಿಸಿ ಸಂಪರ್ಕಿಸುವ ಪ್ರಯಾಣವಾಗಿದೆಯಲ್ಲವೇ ಈ ಯಾತ್ರೆ ? ಖುದ್ ಸಿಗೆ ಹೋಗಿ ಸರ್ವರಿಗೂ ನೇತೃತ್ವ ನೀಡಿ ಮುನ್ನಡೆಸುವುದರ ವಿಪರ್ಯಾಸವೇನೆಂದರೆ, ಸರ್ವ ಧರ್ಮಗಳ ಸರ್ವೋಚ್ಚ ಅಧಿಕಾರವು ಪ್ರವಾದಿ (ಸ) ರವರ ಕೈಗಳಲ್ಲಾಗಿತ್ತು ಎಂದಾಗಿದೆ . ಆ ಸಂದರ್ಭದಲ್ಲಿ ಭೇಟಿಯಾದ ಎಲ್ಲಾ ಪ್ರವಾದಿಗಳು ಹಾಡಿ ಹೊಗಳಿದರು ಹಾಗೂ ತಮ್ಮ ಆಗಮನಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು.
ಈ ಪ್ರಯಾಣದ ಪ್ರತಿಯೊಂದು ಹಂತವು ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದೆ ಅಲ್ಲಾಹನು ಹಬೀಬರನ್ನು ರೋಮನ್ ಸಾಮ್ರಾಜ್ಯದ ಅಧೀನದಲ್ಲಿದ್ದ ಬೈತುಲ್ ಮುಖದ್ದಸ್ ಗೆ ಕರೆದುಕೊಂಡು ಹೋದನು. ಅಲ್ಲಿನ ಸರ್ವ ಜನಾಂಗದವರಿಗೂ ಸರ್ವಧರ್ಮಿಯರಿಗೂ ಅವರ ಕಾಲ ಕಳೆದಿದೆ. ವಿಶ್ವ ವಿಮೋಚಕ ನಾಯಕ ಆಗಮಿಸಿದ್ದಾರೆ , ಅವರನ್ನು ಬರಮಾಡಿಕೊಂಡು ಸ್ವೀಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮನವರಿಕೆ ಮಾಡಲಾಗಿದೆ. ಪ್ರವಾದಿಯವರು ತಮ್ಮ ಇಸ್ಲಾಂ ಧರ್ಮೋಪದೇಶ ದೊಂದಿಗೆ ಮುಂದುವರಿಯುತ್ತಿದ್ದಂತೆ ಅಡೆ-ತಡೆಗಳ ರಾಶಿಯು ಗುಂಪಿನೊಂದಿಗೆ ಬಂದಾಗಲೂ ಸಂಭವಿಸಿದ ಈ ಐತಿಹಾಸಿಕ ಪ್ರಯಾಣಕ್ಕೆ ಮತ್ತೊಂದು ಉದ್ದೇಶವೂ ಕೂಡ ಇದೆ. ಇಸ್ಲಾಂ ಧರ್ಮೋಪದೇಶಕ್ಕೆ ಉತ್ತಮ ನೆಲ ಸಿದ್ಧವಾಗುತ್ತಿದೆ, ಹಾಗೂ ಇಸ್ರಾ ಮಿಅ್ ರಾಜ್ ಅಲ್ಪಾವಧಿಯಲ್ಲಿ ಹೇಗೆ ಸಂಭವಿಸಿತೋ ಹಾಗೆಯೇ ಇಸ್ಲಾಂ ಧರ್ಮವು ಅಲ್ಪಾವಧಿಯಲ್ಲಿ ಇಡೀ ವ್ಯಾಪಕವಾಗಲಿದೆ ಎಂದು ತಿಳಿಸಲಾಗಿದೆ.
ಕಡ್ಡಾಯ ನಮಾಜ಼್ ನ ಮಹತ್ವ ಮತ್ತು ಅದ್ಭುತ ದೃಶ್ಯಗಳ ಸಾಹಸಿಕ ಯಾತ್ರೆಯಾಗಿದೆ ಈ ಪ್ರಯಾಣ. ನಮ್ಮ ಜೀವನದಲ್ಲಿ ನಿತ್ಯವಾಗಿ ಇದೆಲ್ಲವನ್ನು ಅಭ್ಯಾಸ ಮಾಡಿ ಅಳವಡಿಸಿಕೊಂಡು ಬರಬೇಕಾಗಿದೆ. ಹಾಗೂ ವಿಶೇಷವಾಗಿ ಈ ಪ್ರಯಾಣದ ದಿನ (ರಜಬ್ 27 ) ಆ ಪ್ರವಾದಿಯವರಿಗೆ ಲಭಿಸಿದ ಉಡುಗೋರೆಯನ್ನು ಪ್ರತ್ಯೇಕವಾಗಿ ಸ್ಮರಿಸುವುದರೊಂದಿಗೆ ಫುಖಹಾಗಳು ಸೂಚಿಸಿದಂತೆ ಸುನ್ನತ್ ಉಪವಾಸ ಹಾಗೂ ಇನ್ನಿತರ ಸತ್ಕರ್ಮಗಳನ್ನು ಮಾಡಿ ಪುಣ್ಯ ಪಡೆಯಬೇಕಾಗಿದೆ. ಅಲ್ಲಾಹನು ತೌಫೀಕ ನೀಡಿ ಅನುಗ್ರಹಿಸಲಿ ಆಮೀನ್....

No comments:
Post a Comment