ಪುಣ್ಯ ನಬಿಯರ ಶಹಬಾನ್
ಹಿಜರಿ ಕ್ಯಾಲೆಂಡರ್ ಪ್ರಕಾರ ಶಹಬಾನ್ ಎಂಟನೇ ತಿಂಗಳಾಗಿದೆ. ಇದು ಪುಣ್ಯ ನೆಬಿಯರ ತಿಂಗಳೆಂದು ಹದೀಸಿನಲ್ಲಿದೆ. ಪವಿತ್ರವಾದ ಎರಡು ತಿಂಗಳುಗಳ ಎಡೆಯಲ್ಲಿ ( ರಜಬ್ ಹಾಗೂ ರಂಝಾನ್) ಮರೆತು ಹೋಗಲು ಸಾಧ್ಯತೆವಿರುವ ಕಾರಣ ಅದರ ಮಹತ್ವವನ್ನು ಪುಣ್ಯ ನಬಿಯರು ಬಣ್ಣಿಸಿದ್ದು ಕಾಣಬಹುದು.
ಶಹಬಾನ್ ತಿಂಗಳಲ್ಲಿ ಪ್ರವಾದಿಯರು ಅತಿಯಾಗಿ ಉಪವಾಸವನ್ನು ಹಿಡಿಯುವುದನ್ನು ಕಂಡ ಉಸಾಮತ್ ಬಿನ್ ಝೈದ್ (ರ) ಕೇಳಿದರು: ಓ ಪ್ರವಾದಿಯರೇ.. ತಾವು ಈ ತಿಂಗಳಲ್ಲಿ ಉಪವಾಸ ಮಾಡಿದಂತೆ ಇತರ ತಿಂಗಳುಗಳಲ್ಲಿ ಉಪವಾಸ ಹಿಡಿಯುವುದನ್ನು ನಾವು ಕಾಣುವುದಿಲ್ಲವಲ್ಲವೇ..!?
ಪ್ರವಾದಿ (ಸ) ಉತ್ತರಿಸಿದರು: ಇದು ರಜಬ್ ಮತ್ತು ರಂಜಾನ್ ತಿಂಗಳ ನಡುವೆ ಜನರು ನಿರ್ಲಕ್ಷಿಸಲು ಒಲವು ತೋರುವ ತಿಂಗಳು. ಈ ತಿಂಗಳಲ್ಲಿ ಜನರು ಇಬಾದತ್ ಗೆ ಹೆಚ್ಚು ಒತ್ತು ನೀಡಲು ಗಮನಹರಿಸುವುದಿಲ್ಲ. ಈ ತಿಂಗಳಲ್ಲಿ ಮನುಷ್ಯನ ಸದ್ಗುಣಗಳು ಅಲ್ಲಾಹನೆಡೆಗೆ ತಲುಪುತ್ತದೆ. ಹಾಗಾಗಿ ನಾನು ಉಪವಾಸದೊಂದಿಗೆ ನನ್ನ ಅಮಲುಗಳನ್ನು ಅಲ್ಲಾಹನಡೆ ತಲುಪಲು ಬಯಸುತ್ತೇನೆ (ನಸಾಈ).
ರಜಬ್ ತಿಂಗಳ ಹಿರಿಮೆ ಧಾರ್ಮಿಕ ಯುದ್ದಕ್ಕೂ ಅನುಮತಿ ಇಲ್ಲದ್ದರಿಂದ ಪ್ರಾರಂಭವಾಗುತ್ತದೆ. ಪ್ರವಾದಿ (ಸ) ರಜಬ್ ತಿಂಗಳ ಬಗ್ಗೆ ಈ ರೀತಿ ಹೇಳಿದರು: ರಜಬ್ ತಿಂಗಳುಗಳಲ್ಲಿ ಅತ್ಯುತ್ತಮವಾದ ತಿಂಗಳಾಗಿದೆ, ಇದು ಅಲ್ಲಾಹನ ತಿಂಗಳು ಆದ್ದರಿಂದ ರಜಬಿನ ಶ್ರೇಷ್ಠತೆಯನ್ನು ಪರಿಗಣಿಸಿ ಇಬಾದತ್ ಮಾಡುವವನು ಅಲ್ಲಾಹನ ಚಿಹ್ನೆಗಳನ್ನು ವೈಭವೀಕರಿಸುವವನಾಗಿರುತ್ತಾನೆ. ಅವನನ್ನು ಅಲ್ಲಾಹನು ಸ್ವರ್ಗಕ್ಕೆ ಸೇರಿಸಿ ಬಹಳ ತೃಪ್ತಿಯಿಂದ ಆಶೀರ್ವದಿಸುತ್ತಾನೆ.
ಶಹಬಾನ್ ತಿಂಗಳ ಕುರಿತು ಪ್ರವಾದಿಯರು ಹೇಳಿದರು: ಇದು ನನ್ನ ತಿಂಗಳು. ಇದರ ಮಹಿಮೆಯನ್ನು ಪರಿಗಣಿಸುವವನು ನನ್ನ ಸುನ್ನತ್ ಹಿಂಬಾಲಿಸುವವನಾಗಿರುತ್ತಾನೆ. ಅಂತ್ಯ ದಿನದಲ್ಲಿ ಅವನಿಗೆ ನಾನು ಶಫಾಅತ್ ನೀಡಲಿರುವೆನು.
ರಂಜಾನ್ ತಿಂಗಳ ಕುರಿತು ನೆಬಿಯರು ಹೀಗೆ ಬಣ್ಣಿಸಿದರು: ಇದು ನನ್ನ ಸಮುದಾಯದ ತಿಂಗಳು. ಇದರ ಶ್ರೇಷ್ಠತೆಯನ್ನು ಪರಿಗಣಿಸಿ ಅದನ್ನು ಗೌರವಿಸುವ ಮತ್ತು ಹಗಲಿನಲ್ಲಿ ಉಪವಾಸಗೈಯ್ಯುವ ಹಾಗೂ ರಾತ್ರಿಯಲ್ಲಿ ನಮಾಜ್ ನಿರ್ವಹಿಸಿ ತನ್ನ ದೇಹವನ್ನು ಪಾಪಗಳಿಂದ ಮುಕ್ತಗೊಳಿಸುವವನು ಅಂತ್ಯ ದಿನದಲ್ಲಿ ಯಾವುದೇ ವಿಚಾರಣೆ ಇಲ್ಲದೆ ಶಿಕ್ಷೆಯಿಂದ ಮುಕ್ತಿ ಹೊಂದಿದವನಾಗಿ ರಂಜಾನ್ ತಿಂಗಳಿಂದ ಹೊರಬರುತ್ತಾನೆ. (ಬೈಹಖಿ)
ರಜಬ್ ಮತ್ತು ರಂಝಾನ್ ತಿಂಗಳ ನಡುವಿನ ಶಹಬಾನಿನ ಪವಿತ್ರತೆಯು ಅಲ್ಲಾಹನು ಹಾಗೂ ಮಾನವ ಕುಲದ ನಡುವಿನ ಪ್ರವಾದಿ (ಸ) ರ ಸ್ಥಾನಮಾನ ಹಾಗೂ ಶ್ರೇಷ್ಠತೆಯೊಂದಿಗೆ ಸಂಯೋಜಿಸಿದೆ. ಶಹಬಾನ್ ತಿಂಗಳನ್ನು ಪ್ರವಾದಿಯರಿಗೆ ಹೋಲಿಕೆ ಮಾಡಲು ಒಂದು ಕಾರಣವೇನೆಂದರೆ ಪ್ರವಾದಿ (ಸ) ರವರು ಕಡ್ಡಾಯವಲ್ಲದಿದ್ದರೂ ಈ ತಿಂಗಳಲ್ಲಿ ಹೆಚ್ಚು ಉಪವಾಸ ಮಾಡುತ್ತಿದ್ದರು ಎನ್ನುವುದಾಗಿದೆ ಎಂದು ಹದೀಸ್ ವ್ಯಾಖ್ಯಾನಗಾರರು ವಿವರಿಸುತ್ತಾರೆ.
ಪ್ರವಾದಿ (ಸ) ರವರಿಗೆ ಸಂಬಂಧಿಸಿದ ಕಾರ್ಯಗಳೆಲ್ಲವೂ ವಿಶ್ವಾಸಿಗಳಿಗೆ ಅಮೂಲ್ಯವಾಗಿದೆ. ಈ ತಿಂಗಳನ್ನು ಗೌರವಿಸಲು ಮತ್ತು ಸತ್ಕರ್ಮಗಳಿಂದ ಬಾಳಲು ಇದು ಒಂದು ಪ್ರೋತ್ಸಾಹಕವಾಗಿದೆ. ಶಹಬಾನ್ ತಿಂಗಳನ್ನು ಗೌರವಿಸುವುದರಿಂದ ನೆಬಿ (ಸ) ರಲ್ಲಿ ಇರುವ ವಿಶ್ವಾಸವನ್ನು ದೃಢವಾಗಿಸುತ್ತದೆ. ಈ ತಿಂಗಳನ್ನು ಗೌರವಿಸುವುದರಿಂದ ಪ್ರವಾದಿ (ಸ) ನಮ್ಮನ್ನು ನಾಳೆ ಪರಲೋಕದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳುತ್ತಾರೆ. ಕಾರಣ ಇದು ಶುದ್ಧೀಕರಣದ ತಿಂಗಳು. ಈ ತಿಂಗಳಲ್ಲಿ ನಂಬಿಕೆ ಉಳ್ಳವನು ಪಾಪಗಳಿಂದ ಮುಕ್ತಿ ಹೊಂದಿದವನಂತೆ.
ಈ ತಿಂಗಳಲ್ಲಿ ಅನೇಕ ಸಕರಾತ್ಮಕ ಮತ್ತು ತೃಪ್ತಿಕರವಾದ ಸಂಗತಿಗಳು ನಡೆದಿವೆ. ಅವುಗಳಲ್ಲಿ ಎರಡು ಕಾರ್ಯಗಳು ಬಹಳ ಪ್ರಮುಖವಾದವು. ಒಂದು: ಪವಿತ್ರ ಕಾಬ ಶರೀಫ್ ಖಿಬ್ಲಯಾಗಿ ವಹ್ಯ್ (ದಿವ್ಯಭೋಧನೆ) ದೊರಕಿದ ತಿಂಗಳು. ಇದು ಹಿಜರಿ ಎರಡನೇ ವರ್ಷ ಶಬಾನ್ ತಿಂಗಳಲ್ಲಿ ಆಗಿತ್ತು.
ಎರಡು: ನೆಬಿಯರ ಮೇಲೆ ಸ್ವಲಾತ್ ಹಾಗೂ ಸಲಾಂ ಹೇಳಲು ನಿರ್ದೇಶನ ನೀಡಿದ ತಿಂಗಳು. ಈ ಎರಡು ಕುರಾನ್ ವಚನಗಳು ಕೇವಲ ಕಾನೂನನ್ನು ಜಾರಿಗೆ ತರುವುದು ಅಥವಾ ಸುಧಾರಿಸುವುದಕ್ಕೆ ಸೀಮಿತವಾಗಿಲ್ಲ ಬದಲಾಗಿ ಪ್ರವಾದಿಯವರ ಶ್ರೇಷ್ಠತೆಯನ್ನು ಬಿಂಬಿಸುತ್ತದೆ.
ಇಮಾಂ ಫಾಕಿಹಾನಿ (ರ) ಹೇಳುತ್ತಾರೆ: ನನಗೆ ತಿಳಿದಿರುವಂತೆ ಪ್ರವಾದಿ (ಸ) ರ ಮೇಲೆ ಸಲಾತ್ ಹೇಳಲು ಸೂಚಿಸಿದಂತೆ ಬೇರೆ ಯಾವುದೇ ಅಂಬಿಯಾ ಮುರ್ಸಲ್ ಗಳ ಬಗ್ಗೆ ಈ ರೀತಿಯ ನಿರ್ದೇಶನ ಬರಲಿಲ್ಲ. ಇದು ಇತರ ನಬಿಯರಿಗಿಂತ ಪುಣ್ಯಬಿಯರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ.
ಸ್ವಲಾತ್ ಹೇಳುವುದು ಅತೀ ಶ್ರೇಷ್ಠವಾದ ಇಬಾದತ್ ಆಗಿದೆ. ಅದರ ಶ್ರೇಷ್ಠತೆ ಹಾಗೂ ಪರಿಶುದ್ಧತೆ ಪ್ರಸಿದ್ಧವಾಗಿದೆ. ಪ್ರವಾದಿ (ಸ) ರಿಗೆ ಹೋಲಿಸುವಾಗ ವಿಶ್ವಾಸಿ ಗಳಿಗೆ ಸುಲಭವಾಗಿ ನಿರ್ವಹಿಸಬಹುದಾದ ಒಂದು ದೊಡ್ಡ ಇಬಾದತ್ ಕೂಡ ಆಗಿದೆ. ಸ್ವಲಾತ್ ಹೇಳಲು ಸೂಚನೆ ನೀಡುವ ದಿವ್ಯ ಬೋಧನೆ ಬಂದರೆಗಿರುವುದು ಈ ತಿಂಗಳಲ್ಲಾಗಿದೆ. ಖಂಡಿತವಾಗಿಯೂ ಅಲ್ಲಾಹನು ಹಾಗೂ ಅವನ ಮಲಕ್ ಗಳು ಮುತ್ತು ನಬಿಯರ ಮೇಲೆ ಸ್ವಲಾತ್ ಹೇಳುವರು ಆದ್ದರಿಂದ ಓ ಸತ್ಯ ವಿಶ್ವಾಸಿಗಳೇ.. ನೀವು ಕೂಡ ನೆಬಿಯರ ಮೇಲೆ ಸಲಾತ್ ಹೇಳಿರಿ.(ಅಹ್ಝಾಬ್ 56)


No comments:
Post a Comment